NBFCಗಳಿಂದ ದೇಶಾದ್ಯಂತ 3,000 ಹೊಸ ಶಾಖೆಗಳ ಆರಂಭ
ಭಾರತದಲ್ಲಿ ಚಿನ್ನದ ಸಾಲ ಮಾರುಕಟ್ಟೆ ವೇಗವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ನಾನ್–ಬ್ಯಾಂಕಿಂಗ್ ಫೈನಾನ್ಸ್ ಕಂಪನಿಗಳು (NBFC) ಸಾಲಗಾರರ ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಹೊಸ ನಿಯಮಗಳನ್ನು ಜಾರಿಗೆ ತಂದಿವೆ. NBFCಗಳು ಮುಂದಿನ ಒಂದು ವರ್ಷದಲ್ಲಿ ದೇಶಾದ್ಯಂತ 3,000 ಕ್ಕೂ ಹೆಚ್ಚು ಚಿನ್ನದ ಸಾಲ ಶಾಖೆಗಳನ್ನು ತೆರೆಯಲು ಸಿದ್ಧತೆ ನಡೆಸಿವೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್ ಅಂತ್ಯದ ವೇಳೆಗೆ ಚಿನ್ನದ ಸಾಲ ಮಾರುಕಟ್ಟೆ 14.5 ಲಕ್ಷ ಕೋಟಿಗಳ ಮಟ್ಟ ತಲುಪಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಚಿನ್ನದ ಸಾಲದ ವಲಯದಲ್ಲಿ ಇನ್ನೂ ಮುಂಚೂಣಿಯಲ್ಲಿದ್ದರೂ, NBFC ಸಂಸ್ಥೆಗಳು ವೇಗವಾದ ಪ್ರಕ್ರಿಯೆ ಮತ್ತು ಕಡಿಮೆ ದಾಖಲೆ ಅಗತ್ಯಗಳಿಂದಾಗಿ ಹೆಚ್ಚಿನ ಸಾಲಗಾರರನ್ನು ಆಕರ್ಷಿಸುತ್ತಿವೆ.
ಮುತ್ತೂಟ್ ಫೈನಾನ್ಸ್, ಐಐಎಫ್ಎಲ್ ಫೈನಾನ್ಸ್ ಮತ್ತು ಬಜಾಜ್ ಫೈನಾನ್ಸ್ ಸೇರಿ ಹಲವು ಪ್ರಮುಖ NBFCಗಳು ಒಟ್ಟಾಗಿ 1,800 ಕ್ಕೂ ಹೆಚ್ಚು ಹೊಸ ಶಾಖೆಗಳನ್ನು ತೆರೆಯಲು ಯೋಜನೆ ರೂಪಿಸಿದರೆ, ಬಜಾಜ್ ಫೈನಾನ್ಸ್ ಮಾತ್ರ 2027 ರೊಳಗೆ 900 ಶಾಖೆಗಳನ್ನು ಆರಂಭಿಸುವ ಗುರಿ ಹೊಂದಿದೆ. ಹೊಸ NBFC ಸಂಸ್ಥೆಯಾದ ಎಲ್ & ಟಿ ಫೈನಾನ್ಸ್ ಈ ವರ್ಷದಲ್ಲಿ 200 ಶಾಖೆಗಳನ್ನು ಸ್ಥಾಪಿಸಲು ಮುಂದಾಗಿದೆ.
ಐಐಎಫ್ಎಲ್ ಫೈನಾನ್ಸ್ ನೀಡಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ ನೀಡಲಾಗುತ್ತಿರುವ ಚಿನ್ನದ ಸಾಲಗಳಲ್ಲಿ 70 ಶೇಕಡಾ ಸಾಲಗಳನ್ನು ರೈತರು ಮತ್ತು ಸಣ್ಣ ವ್ಯಾಪಾರಿಗಳು ಪಡೆಯುತ್ತಿದ್ದಾರೆ. ಉಳಿದ ಸಾಲಗಳು ಮದುವೆ ವೆಚ್ಚ, ಮನೆ ಸುಧಾರಣೆ, ತುರ್ತು ವೈದ್ಯಕೀಯ ವೆಚ್ಚಗಳು ಮತ್ತು ಅಲ್ಪಾವಧಿ ಹಣಕಾಸಿನ ಅಗತ್ಯಗಳಿಗೆ ಬಳಕೆಯಾಗುತ್ತಿವೆ.
ಕೇಂದ್ರ ಸರ್ಕಾರ ಜಾರಿ ತರುವ ಹೊಸ ನಿಯಮಗಳ ಪ್ರಕಾರ, NBFCಗಳು ಚಿನ್ನದ ಸಾಲ ಶಾಖೆಗಳನ್ನು ತೆರೆಯುವಾಗ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಬೇಕು. ಪ್ರತಿಯೊಂದು ಶಾಖೆಯಲ್ಲೂ ಸ್ಟ್ರಾಂಗ್ ರೂಮ್, 24×7 ಸಿಸಿಟಿವಿ ನಿಗಾವ್ಯವಸ್ಥೆ, ಸೆನ್ಸಾರ್ ಮತ್ತು ಅಲಾರ್ಮ್ ವ್ಯವಸ್ಥೆ ಕಡ್ಡಾಯವಾಗಲಿದೆ. ಹೊಸ ಶಾಖೆಗಳನ್ನು ಸ್ಥಾಪಿಸಲು 8 ಲಕ್ಷದಿಂದ 20 ಲಕ್ಷ ರೂ̀ಗಳವರೆಗೆ ವೆಚ್ಚವಾಗಲಿದ್ದು, ಶಾಖೆಗಳು ಲಾಭದಾಯಕವಾಗಲು ಸಾಮಾನ್ಯವಾಗಿ 1.5 ರಿಂದ 2 ವರ್ಷಗಳ ಅವಧಿ ಬೇಕಾಗುತ್ತದೆ.
ICRA ರೇಟಿಂಗ್ ಸಂಸ್ಥೆಯ ವರದಿ ಪ್ರಕಾರ, ಚಿನ್ನದ ಬೆಲೆ ಏರಿಕೆ ಮತ್ತು NBFC ಗಳ ವಿಸ್ತರಣೆ ಹಿನ್ನೆಲೆ FY26 ರ ವೇಳೆಗೆ NBFCಗಳ ಚಿನ್ನದ ಸಾಲ ಆಸ್ತಿಗಳು 30 ರಿಂದ 35 ಶೇಕಡಾವರೆಗೆ ಹೆಚ್ಚಳ ಕಾಣುವ ಸಾಧ್ಯತೆ ಇದೆ. ದೇಶದ ಮನೆಗಳಲ್ಲಿ ಬಳಕೆಯಾಗದೆ ಇರುವ ದೊಡ್ಡ ಪ್ರಮಾಣದ ಚಿನ್ನವೂ ಚಿನ್ನದ ಸಾಲ ಮಾರುಕಟ್ಟೆಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ಕೇಂದ್ರ ಸರ್ಕಾರದ ಹೊಸ ನಿಯಮಗಳು ಜಾರಿಗೆ ಬಂದ ನಂತರ ಚಿನ್ನದ ಸಾಲ ಪಡೆಯುವ ಗ್ರಾಹಕರಿಗೆ ಹೆಚ್ಚುವರಿ ಸುರಕ್ಷತೆ, ಪಾರದರ್ಶಕತೆ ಮತ್ತು ಸುಧಾರಿತ ಸೇವೆಗಳ ಲಭಿಸುವ ನಿರೀಕ್ಷೆಯಿದೆ.